ನಾಮದೇವ
1270-1350 ಮಹಾರಾಷ್ಟ್ರದ ಸಂತ. ಜ್ಞಾನೇಶ್ವರನ ಸಮಕಾಲೀನ. ಇಂದಿನ ವಿಶಾಲವಾದ ವಿಟ್ಠಲಭಕ್ತಿಯ ಸಂಪ್ರದಾಯಕ್ಕೆ ತಳಹದಿಯನ್ನು ಹಾಕಿದವ. ತಂದೆ ದಾಮಾಶೇಟಿ. ವೃತ್ತಿಯಲ್ಲಿ ಸಿಂಪಿಗ. ಈತ ತನ್ನ ಆರಂಭದ ಜೀವನವನ್ನು ನೀಚ ವೃತ್ತಿಯಲ್ಲಿ ಕಳೆದಂತೆ ತಿಳಿಯುತ್ತದೆ. ಕಳ್ಳರ ಸಹವಾಸದಲ್ಲಿದ್ದು, ಅನೇಕ ದಾರಿಹೋಕರನ್ನು ಸುಲಿದು, ಕೊಂದು ಒಮ್ಮೆ ಅವಂಡಿ ಎಂಬ ಹಳ್ಳಿಗೆ ದೇವ ದರ್ಶನಕ್ಕೆ ಹೋದಾಗ ರೋದಿಸುತ್ತಿದ್ದ ಹೆಂಗಸೊಬ್ಬಳನ್ನು ಕಂಡು ಮರುಗಿ ಆಕೆಯ ದುಃಖಕ್ಕೆ ಕಾರಣವೇನೆಂದು ವಿಚಾರಿಸಿದ. ಆಕೆಯ ಗಂಡನನ್ನು ಕೊಂದವನು ತಾನೇ ಎಂದು ತಿಳಿದಾಗ ಇವನಲ್ಲಿ ವೈರಾಗ್ಯ ಹುಟ್ಟಿತು. ಅನಂತರ ಈತ ಪಂಢರಪುರಕ್ಕೆ ಬಂದು ವಿಟ್ಠಲನ ಭಕ್ತನಾದ. ಒಮ್ಮೆ ಜ್ಞಾನೇಶ್ವರನೇ ಮೊದಲಾದ ಸಂತರು ಕೂಡಿದಾಗ ಗೋರಾ ಕುಂಬಾರ ಎಂಬ ಭಕ್ತ ತನ್ನ ಕೈಯೊಳಗಿನ ಬಡಿಗೆಯಿಂದ ಹೊಡಿದು, ಈ ಗಡಿಗೆ ಕಚ್ಚಾ ಇದೆ ಎಂದು ಹೇಳಿದ. ಇದರಿಂದ ಅವಮಾನಿತನಾದ ಈತ ವಿನೋಬಾಖೇಚರರ ದರ್ಶನಕ್ಕಾಗಿ ಬಾರ್ಶಿಗೆ ಹೋದ. ದೇವರು ಎಲ್ಲೆಡೆಗೂ ಇದ್ದಾನೆಂಬ ಮಾತನ್ನು ವಿನೋಬಾ ಈತನಿಗೆ ಮನವರಿಕೆ ಮಾಡಿಕೊಟ್ಟ. ಜ್ಞಾನೇಶ್ವರನನ್ನು ಕೂಡಿಕೊಂಡು ಈತ ಭರತಖಂಡದ ತೀರ್ಥಕ್ಷೇತ್ರಗಳ ಸಂದರ್ಶನ ಮಾಡಿದ. 1926 ರಲ್ಲಿ ಜ್ಞಾನದೇವ ತೀರಿಕೊಂಡಾಗ ಈತ ಅಲ್ಲಿದ್ದು 1350 ರಲ್ಲಿ ಸಮಾಧಿಯನ್ನು ಹೊಂದಿದ. ಪಂಢರಪುರದಲ್ಲಿರುವ ಶ್ರೀ ವಿಟ್ಠಲಮಂದಿರದ ಮಹಾದ್ವಾರದ ಮೊದಲ ಮೆಟ್ಟಿಲೇ ಈತನ ಸಮಾಧಿ ಸ್ಥಾನವೆಂದು ತಿಳಿಯಲಾಗಿದೆ.

ಅತ್ಯಂತ ಆರ್ತಭಕ್ತನಾದ ಈತ ಪರಮಾತ್ಮನ ನಾಮದ ಮಹಿಮೆಯನ್ನು ಹೆಚ್ಚಾಗಿ ಸಾರಿದ್ದಾನೆ. ನಿನ್ನ ನಾಮವನು ಒಂದರ ಗಳಿಗೆ ನೆನೆಯದಿರೆ ನನ್ನ ಪ್ರಾಣವೇ ಹೋಗಲಿ ಎನ್ನುತ್ತಾನೆ. ಪ್ರಪಂಚವನ್ನು ಮಾಡಿ, ಪರಮಾರ್ತವನ್ನು ಪಡೆಯುವುದು ಸಾದ್ಯವಿಲ್ಲವೆಂದು ಈತನ ಅಭಿಪ್ರಾಯ. ಭಕ್ತ ಮಲಗಿ ಹಾಡಿದರೆ ಪರಮಾತ್ಮ ಕುಳಿತು ಕೇಳುತ್ತಾನೆ; ಆತ ಕುಳಿತು ಹಾಡಲು ಪರಮಾತ್ಮ ನಿಂತು ಕೇಳುತ್ತಾನೆ; ನಿಂತು ಹಾಡಿದರೆ ಭಕ್ತರ ಮುಂದೆ ಪರಮಾತ್ಮ ನಲಿಯುತ್ತ ಕುಣಿಯುತ್ತಾನೆ ಎನ್ನುತ್ತಾನೆ ಈ ಸಂತ. ಪರಮಾತ್ಮನ ಸಾಕ್ಷಾತ್ಕಾರದಿಂದ ಮಾನವ ದೇವತ್ವಕ್ಕೇರಬಹುದು ಎನ್ನುವ ನಂಬಿಕೆ ಈತನದು.

ಈತನ ತಂದೆ ಮೊದಲ್ಗೊಂಡು ಮನತನದವರೆಲ್ಲ ಸೇರಿ ನೂರು ಕೋಟಿ ಅಭಂಗಗಳನ್ನು ರಚಿಸಿದ್ದಾರೆ ಎಂದು ವದಂತಿ.
(ಎಂ.ಎ; ಡಿ.ಆರ್.ಬಿಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ